ಟೋಕಿಯೋ
ಜಪಾನಿನ ರಾಜಧಾನಿ. ದೇಶದ ಸಾಂಸ್ಕøತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಚಟುವಟಿಕೆಗಳ ಕೇಂದ್ರ. ಹಾನ್ಷೂ ದ್ವೀಪದ ಆಗ್ನೇಯದಲ್ಲಿ, ಟೋಕಿಯೋ ಕೊಲ್ಲಿಯ ವಾಯುವ್ಯತೀರದಲ್ಲಿ. ಉ.ಅ.350 40' ಮತ್ತು ಪೂ.ರೇ. 1390 45' ಮೇಲೆ ಇದೆ. ಈ ನಗರ ಸುಮೀಡ ನದಿಯ ಮುಖದಲ್ಲಿ ಸ್ಥಾಪಿತವಾದ್ದರಿಂದ ಇದಕ್ಕೆ ಹಿಂದೆ ಎಡೋ (ಅಳಿವೆ) ಎಂಬ ಹೆಸರಿತ್ತು. 1868ರಲ್ಲಿ ಇದನ್ನು ಆ ದೇಶದ ರಾಜಧಾನಿಯಾಗಿ ಘೋಷಿಸಿದಾಗ ಟೋಕಿಯೋ (ಪೂರ್ವದ ರಾಜಧಾನಿ) ಎಂದು ಕರೆಯಲಾಯಿತು. ಸುಮೀಡ ಈ ನಗರವನ್ನು ಎರಡು ಅಸಮ ಭಾಗಗಳನ್ನಾಗಿ ವಿಭಜಿಸುತ್ತದೆ. ಅನೇಕ ಕಾಲುವೆಗಳು ವೃತ್ತಾಕಾರದಲ್ಲಿ ಈ ನಗರವನ್ನು ಛೇದಿಸುತ್ತವೆ. ಮಹಾ ಟೋಕಿಯೋ ಪ್ರಪಂಚದಲ್ಲೇ ಅತ್ಯಂತ ಜನನಿಬಿಡ ನಗರವೆಂದು ಹೇಳಲಾಗಿದೆ. ನಗರದ ಜನಸಂಖ್ಯೆ 87,87,249 (1971ಅಂ.)

18 ಮೈ. ದೂರದಲ್ಲಿರುವ ಯೋಕಾಹಾಮ ರೇವುಪಟ್ಟಣ ಟೋಕಿಯೋದ ಮುಖ್ಯ ಬಂದರು. ಟೋಕಿಯೋ ನಗರವನ್ನು ಭೂವಿನ್ಯಾಸದ ಪ್ರಕಾರ ಎರಡು ಭಾಗಗಳನ್ನಾಗಿ ವಿಂಗಡಿಸಬಹುದು. ಮೊದಲನೆಯದು 50'-150' ಎತ್ತರದ ದಿಣ್ಣೆಯ ಭಾಗ. ಇದು ನಗರದ ಉತ್ತರ ಮತ್ತು ಪಶ್ಚಿಮ ವಲಯಗಳನ್ನೊಳಗೊಂಡಿದೆ. ಇದಕ್ಕೆ ಯಾಮನೋಟೆ (ಮೇಲ್ನಗರ) ಎಂದು ಹೆಸರು. ತಗ್ಗಾದ ಭಾಗ ಸುಮೀಡ ನದಿಯ ಇಕ್ಕೆಲಗಳಲ್ಲಿ ಹರಡಿ ಅನೇಕ ನೀರ್ಗಾಲುವೆಗಳಿಂದ ಕೂಡಿದೆ. ಈ ಭಾಗಕ್ಕೆ ಷಿತಾಮಾಚಿ (ಕೆಳನಗರ) ಎಂದು ಹೆಸರು. ಈ ಭಾಗದಲ್ಲಿರುವ ಅನೇಕ ಸೇತುವೆಗಳಲ್ಲಿ ನಿಹಾನ್‍ಕಾಷಿ ಮತ್ತು ಬ್ರಿಡ್ಜ್ ಆಫ್ ಜಪಾನ್ (ಜಪಾನಿನ ಸೇತುವೆ) ಬಹಳ ಪ್ರಸಿದ್ಧವಾಗಿವೆ. ಕೆಳನಗರ ವ್ಯವಹಾರ ಮತ್ತು ಕೈಗಾರಿಕೋದ್ಯಮಗಳ ವಲಯ. ಮೇಲ್ನಗರದಲ್ಲಿ ಒಳ್ಳೆಯ ವಾಸಗೃಹಗಳಿವೆ. ಮೇಲ್ನನಗರದಲ್ಲಿ ಉಷ್ಣತೆ ಕೆಳನಗರದಕ್ಕಿಂತ ಕಡಿಮೆ. ಟೋಕಿಯೋ ಮಧ್ಯಭಾಗದಲ್ಲಿ ವಾರ್ಷಿಕ ಮಾಧ್ಯ ಉಷ್ಣತೆ 140ಅ (580 ಈ). ಆಗಸ್ಟ್ ಅತ್ಯಂತ ಹೆಚ್ಚಿನ ಉಷ್ಣತೆಯ ತಿಂಗಳು. ಆಗಿನ ಮಾಧ್ಯ ಉಷ್ಣತೆ 26.40 ಅ (79.50ಈ). ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಮಾಧ್ಯ ಉಷ್ಣತೆ 200ಅ (680 ಈ), ಸಾಪೇಕ್ಷ ತೇವಾಂಶ 80%. ಸರಾಸರಿಯಲ್ಲಿ ವರ್ಷದಲ್ಲಿ 101.8 ಅವಪಾತ ದಿನಗಳು. 13 ದಿನ ಹಿಮ ಬೀಳುತ್ತದೆ. ಮೇಲ್ನಗರದಲ್ಲಿ ರಾತ್ರಿಯ ವೇಳೆಯಲ್ಲಿ ಕೆಳನಗರದಲ್ಲಿರುವುದಕ್ಕಿಂತ ಸಾಮಾನ್ಯವಾಗಿ 50 ಅ.(90 ಈ) ಕಡಿಮೆ ಉಷ್ಣತೆ ಇರುತ್ತದೆ.

ಬೆಂಕಿ, ಭೂಕಂಪ, ಎರಡನೆಯ ಮಹಾಯುದ್ಧದ ವಿಮಾನದಾಳಿ-ಇವುಗಳಿಂದ ನಾಶಹೊಂದಿದಾಗಲೆಲ್ಲ ನಗರವನ್ನು ಪುನರ್ನಿರ್ಮಿಸುವುದರಿಂದ ಇದು ಜಗತ್ತಿನ ಅತ್ಯಾಧುನಿಕ ನಗರಗಳಲ್ಲಿ ಒಂದಾಗಿದೆ.

	ಟೋಕಿಯೋ ನಗರದ ರಸ್ತೆವ್ಯವಸ್ಥೆ, ಸುರಂಗಮಾರ್ಗ, ವಿದ್ಯುತ್ ರೈಲು, ಬಸ್ಸು, ವಿದ್ಯುತ್ ಕಾರು, ವಿದ್ಯುತ್ ಮತ್ತು ಡೀಸೆಲ್ ರೈಲು ಮುಂತಾದವು ಅತ್ಯಂತ ಆಧುನಿಕವೂ ಸಮರ್ಪಕವೂ ಆದವು. ಜಪಾನಿನ ಮೊದಲನೆಯ ಮಾನೊ ರೇಲ್ ವ್ಯವಸ್ಥೆ 1964 ರಲ್ಲಿ ಆರಂಭವಾಯಿತು. ಇದು 13 ಕಿಮೀ. ದೂರದಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಟೋಕಿಯೋದೊಂದಿಗೆ ಸೇರಿಸುತ್ತದೆ. ಟೋಕಿಯೋವಿನ ಸುರಂಗಮಾರ್ಗ 117.5 ಕಿಮೀ. ಉದ್ದವಾಗಿದೆ. 1964ರಲ್ಲಿ, ಟೋಕಿಯೋದಲ್ಲಿ ನಡೆಯಲಿದ್ದ ಒಲಿಂಪಿಕ್ ಕ್ರೀಡಾಸ್ಪರ್ಧೆಗಳ ವೇಳೆಗೆ ಸರಿಯಾಗಿ, ನಿರ್ಮಾಣವಾದ ಮೋಟಾರಿನ ಬಾಟಾ ಮಾರ್ಗಗಳು ನಗರದ ಹೃದಯ ಪ್ರದೇಶಕ್ಕೂ ಉಪನಗರಗಳಿಗೂ ವಿಮಾನನಿಲ್ದಾಣಕ್ಕೂ ಸಂಪರ್ಕ ಕಲ್ಪಿಸುತ್ತವೆ. ಈ ಮಾರ್ಗಗಳಲ್ಲಿ ಕೆಲವು ಭಾಗಗಳು ಈಗ ಉಪಯೋಗದಲ್ಲಿಲ್ಲದ ನಾಲೆಗಳ ಮೇಲೆ ಎರಡು ಮೂರು ಅಂತಸ್ತುಗಳ ಎತ್ತರದಲ್ಲಿ ಸಾಗುತ್ತವೆ. ಈ ಕಾಲುವೆಗಳನ್ನು ಪುರಾತನ ಎಡೋದ ರಕ್ಷಣೆಗಾಗಿ ನಿರ್ಮಿಸಲಾಗಿತ್ತು. ಎತ್ತರದ ಮಾರ್ಗಗಳ ಕೆಳಗೆ ಸಣ್ಣ ಕಚೇರಿಗಳೂ ಅಂಗಡಿಗಳೂ ಇವೆ.

	ಎಡೋವನ್ನು ಕುರಿತಂತೆ 1180ರಷ್ಟು ಹಿಂದಿನವೆನ್ನಲಾದ ದಾಖಲೆಗಳಿವೆಯಾದರೂ ಅವು ಎಷ್ಟರ ಮಟ್ಟಿಗೆ ನಂಬಲರ್ಹವೆಂಬುದನ್ನು ಹೇಳಲಾಗುವುದಿಲ್ಲ. 1456ರಲ್ಲಿ ಓಟ ಸುಕೆನಾಗ ಚಕ್ರವರ್ತಿ ಇಲ್ಲಿ ಈಗಿನ ಅರಮನೆಯ ಸ್ಥಳದಲ್ಲಿ ಮೊದಲನೆಯ ದುರ್ಗ ನಿರ್ಮಿಸಿದ. ಆಗ ಎಡೋದ ನಿಜವಾದ ಇತಿಹಾಸ ಆರಂಭವಾಯಿತೆನ್ನಬಹುದು. 16 ನೆಯ ಶತಮಾನದ ಅಂತ್ಯದಲ್ಲಿ ಎಡೋ ಕೇವಲ ನೂರು ಮನೆಗಳಿಂದ ಕೂಡಿದ ಒಂದು ಮೀನುಗಾರರ ಹಳ್ಳಿಯಾಗಿತ್ತು. 1590ರಲ್ಲಿ ಟೋಕುಗಾವ ಇಯೆಯಾಸುವಿನ ಕೈಗೆ ಬರುವವರೆಗೂ ಈ ದುರ್ಗ ಹಲವು ಸಾರಿ ಕೈ ಬದಲಾಯಿಸಿತು. ಎಡೋವಿನ ಸನ್ನಿವೇಶಮಹತ್ವದಿಂದಾಗಿ ಅವನು ಎಡೋವನ್ನು ತನ್ನ ಮುಖ್ಯ ದುರ್ಗವಾಗಿ ಮಾಡಿಕೊಂಡ. ಇಯೆಯಾಸು ಜಪಾನಿನ ಷೋಗನ್ ಆದಾಗ ಎಡೋವನ್ನು ತನ್ನ ಮಿಲಿಟರಿ ಸರ್ಕಾರದ ಆಡಳಿತ ಕೇಂದ್ರವಾಗಿ ಮಾಡಿದ. ಕೀಯೋಟೋದಲ್ಲಿ ಒಂದು ಛಾಯ ಆಸ್ಥಾನವನ್ನು ಮುಂದುವರಿಸಿದರೂ ವಾಸ್ತವವಾಗಿ ಎಡೋವೇ ರಾಜಧಾನಿಯಾಯಿತು.

	ಮಿಲಿಟರಿ ಸರ್ಕಾರ ತುಂಬ ಉತ್ಸುಕತೆಯಿಂದ ಎಡೋದ ಬೆಳವಣಿಗೆಯಲ್ಲಿ ಆಸಕ್ತಿ ವಹಿಸಿತು. ಕಡಲಕರೆಯ ಜವುಗು ನೆಲದ ನೀರು ಬತ್ತಿಸಿ ಪಟ್ಟಣವನ್ನು ವಿಸ್ತರಿಸಲಾಯಿತು. ಎಡೋ ಕೊಲ್ಲಿಗೆ ಸೇರುತ್ತಿದ್ದ ಟೋನೆ ನದಿಯ ದಿಕ್ಕು ಬದಲಿಸಿ ಅದು ನೇರವಾಗಿ ಪೆಸಿಫಿಕ್ ಸಾಗರ ಸೇರುವಂತೆ ಮಾಡಲಾಯಿತು. ಟೋಕುಗಾವನ ಕೈಕೆಳಗಿದ್ದ ಸು. 80,000 ಸಾಮುರೈಗಳನ್ನು (ಯೋಧರು) ಅಲ್ಲಿಗೆ ತರಲಾಯಿತು. ನಗರ ಬೇಗ ಬೆಳೆಯಿತು. ಎಲ್ಲ ಊಳಿಗಮಾನ್ಯ ಪ್ರಭುಗಳೂ ಎಡೋದಲ್ಲಿ ಮನೆ ಕಟ್ಟಿ, ಸ್ವಲ್ಪ ಕಾಲ ಅಲ್ಲೇ ವಾಸಿಸಬೇಕೆಂದು ಟೋಕಾಗಾವ ಆದೇಶ ಹೊರಡಿಸಿದ. ಕುಶಲಕೆಲಸಗಾರರೂ ವ್ಯಾಪಾರಿಗಳೂ ಸಾಮಾನ್ಯರೂ ಅಲ್ಲಿ ನೆಲಸಿದರು. ಅನೇಕ ದೇವಾಲಯಗಳೂ ಚೈತ್ಯಗಳೂ ನಿರ್ಮಾಣವಾದವು.

	ಟೋಕಾಗುವ ನಗರವನ್ನು ಜೇಡನ ಬಲೆಯಂತೆ ಯೋಜಿಸಲಾಗಿತ್ತು. ಆಧುನಿಕ ಟೋಕಿಯೋ ಬಹಳ ಮಟ್ಟಿಗೆ ಅಂತೆಯೇ ಇದೆ. ಟೋಕಾಗುವ ದುರ್ಗವೇ ಚಕ್ರವರ್ತಿಯ ಅರಮನೆಯ ನಿವೇಶನವಾಯಿತು. ಇದು ನಗರದ ಕೇಂದ್ರಸ್ಥಾನ. ಇದರ ಸುತ್ತಲೂ ವೃತ್ತಗಳಂತೆ ಅಗಳುಗಳೂ ರಸ್ತೆಗಳೂ ಇವೆ. ಕೇಂದ್ರದಿಂದ ಹೊರಡುವ ಅರೆಕಾಲುಗಳಂತೆಯೂ ರಸ್ತೆಗಳಿವೆ. ಕೆಲವು ಅಗಳುಗಳನ್ನು ಅನಂತರ ಭರ್ತಿ ಮಾಡಿ ಹೊಸ ರಸ್ತೆಗಳನ್ನೂ ಕಟ್ಟಡಗಳನ್ನೂ ನಿರ್ಮಿಸಲಾಯಿತು. ಹೊರಗಿನ ಅಗಳುಗಳ ಒಳಗಿನ ವೃತ್ತದಲ್ಲಿದ್ದ ಮನೆಗಳು ಯೋಧರಿಗಾಗಿ ಕಟ್ಟಿದವು. ಈ ಪ್ರದೇಶವನ್ನು ಮರುನೌಚಿ (ಒಳ ವೃತ್ತ) ಎಂದು ಕರೆಯಲಾಯಿತು. ಇದು ಈಗ ನಗರದ ಮುಖ್ಯ ವ್ಯಾಪಾರಸ್ಥಳ. ವ್ಯಾಪಾರಿಗಳು ಅಗಳಿನ ಹೊರಗಡೆ ಮನೆಗಳನ್ನು ಕಟ್ಟಿಕೊಂಡರು. ಇದು ಈಗಲೂ ವ್ಯಾಪಾರ ಕೇಂದ್ರವಾಗಿಯೇ ಉಳಿದಿದೆ. ರಕ್ಷಣೆಗೆ ಪೂರಕವಾಗಿ ಆಯಕಟ್ಟಿನ ಸ್ಥಳಗಳಲ್ಲಿ ದೇವಾಲಯಗಳನ್ನೂ ಚ್ಯೆತ್ಯಗಳನ್ನೂ ನಿರ್ಮಿಸಲಾಯಿತು.

	ಅನೇಕ ದೊಡ್ಡ ಕಾರ್ಖಾನೆಗಳು ನಗರದ ಒಳ ಹಾಗೂ ಹೊರ ಭಾಗಗಳಲ್ಲಿ ಕೇಂದ್ರಿಕೃತವಾದುವು. ನೂತನ ಸಾರಿಗೆ ಸಂಪರ್ಕ ವ್ಯವಸ್ಥೆಯಿಂದ ಬೆಳವಣಿಗೆ ಮುದುವರಿಯುತ್ತಿದೆ. ಟೋಕಿಯೋಗೂ ಯೋಕಹಾಮ ಬಂದರಿಗೂ ರೈಲ್ವೆ ಸಂಪರ್ಕ ಏರ್ಪಟ್ಟಿದೆ. ಈ ರೈಲುಮಾರ್ಗವನ್ನು 1872ರಲ್ಲಿ ನಿರ್ಮಿಸಲಾಯಿತು. 1910ರಲ್ಲಿ ನಗರದ ಸುತ್ತ ವಿದ್ಯುತ್ ರೈಲುಮಾರ್ಗವನ್ನು ನಿರ್ಮಿಸಲಾಯಿತು. ಅನಂತರ ಅನೇಕ ಮಾರ್ಗಗಳನ್ನು ರಚಿಸಿ, ನಗರದೊಳಗೆ ತ್ವರಿತವಾಗಿ ಸಂಚಾರ ಸಾಧ್ಯವಾಗುವಂತೆ ಏರ್ಪಡಿಸಲಾಯಿತು.

	19ನೆಯ ಶತಮಾನದ ಕೊನೆಯ ಭಾಗದಲ್ಲಿ ಯೋಕಹಾಮವನ್ನು ಟೋಕಿಯೋವಿನ ಹೊರವಲಯದ ಬಂದರನ್ನಾಗಿ ಕಟ್ಟಿ ಬೆಳೆಸಲಾಯಿತು. ಏಕೆಂದರೆ ಟೋಕಿಯೋ ಕೊಲ್ಲಿಯ ಮೇಲ್ಭಾಗ ಹೆಚ್ಚು ಆಳವಿಲ್ಲ. ಆದರೂ 1930ರ ಆದಿಯಲ್ಲಿ ಟೋಕಿಯೋ ನಗರಕ್ಕೆ ಸೇರುವಂತೆ ಒಂದು ಕಾಲುವೆಯನ್ನು ನಿರ್ಮಿಸಲಾಯಿತು. ಇದರಿಂದ ಅನೇಕ ದೊಡ್ಡ ಹಡಗುಗಳು ಟೋಕಿಯೋ ನಗರದ ರೇವಿನವರೆಗೂ ಬರಲು ಅನುಕೂಲವಾಗಿದೆ. ಇದು ಅಲ್ಲಿಯ ಜಲಸಾರಿಗೆಯ ಬೆಳವಣಿಗೆಗೆ ಕಾರಣವಾಯಿತು. ಎರಡನೆಯ ಮಹಾಯುದ್ಧದ ಅನಂತರ ಟೋಕಿಯೋ ಕೊಲ್ಲಿಯ ಉತ್ತರದ ಕಡೆಯಲ್ಲಿ ಕೈಗಾರಿಕೆಗಳು ಆರಂಭವಾದವು. ಶಿಬಾ ಎಂಬಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಇವೆ. ಇವುಗಳಿರುವ ಪ್ರದೇಶಕ್ಕೆ ಕೀಯೋ ಎಂದು ಹೆಸರು. ಹನೇಡಾದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ.

	ಅರಮನೆ ಇರುವುದು ನಗರದ ಮಧ್ಯದಲ್ಲಿ. ಬೆಂಕಿಯಿಂದಲೂ ಎರಡನೆಯ ಮಹಾಯುದ್ಧದ ಬಾಂಬುದಾಳಿಯಿಂದಲೂ ಇದು ನಾಶವಾಗಿತ್ತು. ಇದನ್ನು ಪುನರ್ನಿರ್ಮಿಸಲಾಗಿದೆ. ಅನೇಕ ಮುಖ್ಯ ಸರ್ಕಾರಿ ಭವನಗಳು ಈ ಅರಮನೆಯ ಹತ್ತಿರದಲ್ಲೇ ಸುತ್ತಲೂ ಇವೆ. ಜಪಾನೀ ಸಂಸತ್ ಭವನ (ಡೈಯಟ್) ಇರುವುದು ಇಲ್ಲೇ. ಅದೊಂದು ಭವ್ಯಭವನ. ಅದರ ಸನಿಹದಲ್ಲೆ ಶ್ರೇಷ್ಠ ನ್ಯಾಯಾಲಯ, ಪ್ರಧಾನ ಮಂತ್ರಿಯ ಸರ್ಕಾರಿ ಭವನ, ಅನೇಕ ಸರ್ಕಾರಿ ಕಚೇರಿಗಳು ಹಾಗೂ ಸಚಿವಾಲಯಗಳು ಇವೆ. ಟೋಕಿಯೋ ನಗರಾಡಳಿತ ಭವನವೂ ಪೋಲಿಸ್ ಕಚೇರಿಯೂ ಇಲ್ಲೇ ಉಂಟು. ಅನೇಕ ವಿಶ್ವವಿದ್ಯಾಲಯಗಳಿಂದಲೂ ಗ್ರಂಥಲಯಗಳಿಂದಲೂ ವಸ್ತುಸಂಗ್ರಹಾಲಯಗಳಿಂದಲೂ ಕೂಡಿರುವ ಟೋಕಿಯೋ ನಗರ ಜಪಾನಿನ ಸಂಸ್ಕøತಿಯ ಕೇಂದ್ರ ಅಲ್ಲಿ ಐದು ರಾಷ್ಟ್ರೀಯ ವಿಶ್ವವಿದ್ಯಾಲಯಗಳೂ ನಾಲ್ಕು ಖಾಸಗಿ ವಿಶ್ವವಿದ್ಯಾಲಯಗಳೂ ಏಳು ತಾಂತ್ರಿಕ ವಿಶ್ವವಿದ್ಯಾಲಗಳೂ ಇವೆ.

	ಟೋಕಿಯೋ ರಾಷ್ಟ್ರೀಯ ವಸ್ತುಸಂಗ್ರಹಾಲಯ, ರಾಷ್ಟ್ರೀಯ ಆಧುನಿಕ ಕಲಾ ವಸ್ತುಸಂಗ್ರಹಾಲಯ, ಮೆಟ್ರೋಪಾಲಿಟನ್ ಫೈನ್ ಆರ್ಟ್ ಗ್ಯಾಲರಿ, ಬ್ರಿಡ್ಜ್‍ಸ್ಟನ್ ಗ್ಯಾಲರಿ, ಒಕುರ ಪ್ರಾಚೀನ ವಸ್ರುಸಂಗ್ರಹಾಲಯ, ಜಾನಪದ ವಸ್ತುಸಂಗ್ರಹಾಲಯ-ಇವು ವಸ್ತುಸಂಗ್ರಹಾಲಯಗಳಲ್ಲಿ ಮುಖ್ಯವಾದವು. ದಿನದಿನವೂ ಸಾವಿರಾರು ಮಂದಿ ವಿದೇಶಿಯರು ಬಂದು ಇವನ್ನು ವೀಕ್ಷಿಸುತ್ತಾರೆ. ಅನೇಕ ವಿಜ್ಞಾನ ವಸ್ತು ಸಂಗ್ರಹಾಲಯಗಳೂ ಇವೆ. ದೊಡ್ಡ ಇಲಾಖಾ ಮಳಿಗೆಗಳಲ್ಲಿ ಪ್ರಾಚೀನ ಹಾಗೂ ಸಮಕಾಲೀನ ವಸ್ತುಗಳನ್ನು ಪ್ರದರ್ಶಿಸಲಾಗಿದೆ.

	ಟೋಕಿಯೋ ನಗರದಲ್ಲಿ ನಾಲ್ಕು ಬಗೆಯ ನಾಟಕ ಮಂದಿರಗಳುಂಟು : ಇವುಗಳಲ್ಲಿ ನೋ ಮತ್ತು ಕಬೂಕಿ ಪ್ರಾಚೀನವಾದವು. ಇವುಗಳಲ್ಲಿ ನಾಟಕ ಮತ್ತು ಚಲನಚಿತ್ರ ಮಂದಿರಗಳೂ ಉಂಟು.  ಟೋಕಿಯೋ ನಗರದಲ್ಲಿ 25ಕ್ಕೂ ಹೆಚ್ಚು ಉದ್ಯಾನಗಳೂ ಪ್ರಾಣಿಸಂಗ್ರಹಾಲಯವೂ ಇವೆ.

	ಟೋಕಿಯೋ ನಗರವನ್ನು 23 ವಿಭಾಗಗಳನ್ನಾಗಿ (ವಾರ್ಡ್) ಮಾಡಲಾಗಿದೆ. ಇವುಗಳಲ್ಲಿ ಹದಿನೈದು ವಿಭಾಗಗಳನ್ನು 1932 ರಲ್ಲಿ ನಗರಕ್ಕೆ ಸೇರಿಸಲಾಯಿತು. ಟೋಕಿಯೋ ನಗರದ ಆಡಳಿತ ನಡೆಸಲು ಒಬ್ಬ ಗವರ್ನರನೂ 120 ಸದಸ್ಯರಿಂದ ಕೂಡಿದ ನಗರಮಂಡಲಿಯೂ ಉಂಟು. ಇವರು ಚುನಾಯಿತರು.
(ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ